ಹೆಗ್ಗೆರೆ -
	ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಒಂದು ಗ್ರಾಮ. ಜೈನರ ಯಾತ್ರಾಸ್ಥಳ. ಹೊಸದುರ್ಗ-ಹುಳಿಯಾರು ಮಾರ್ಗದಲ್ಲಿ ಹೊಸದುರ್ಗದ ಆಗ್ನೇಯಕ್ಕೆ 29 ಕಿಮೀ ದೂರದಲ್ಲಿದೆ. 

	ಈ ಗ್ರಾಮದಲ್ಲಿ ಹೊಯ್ಸಳರ ಕಾಲದ ಸುಂದರ ದೇವಾಲಯಗಳೂ ಒಂದು ಜೈನ ಬಸದಿಯೂ ಇವೆ. ಇಲ್ಲಿರುವ ಮೂರು ದೇವಾಲಯಗಳಲ್ಲಿ ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳಿರುವ ಕಲ್ಲೇಶ್ವರ ದೇವಾಲಯ ದೊಡ್ಡದು. ದಕ್ಷಿಣಾಭಿಮುಖವಾಗಿರುವ ಈ ದೇವಾಲಯದ ಶಿವಲಿಂಗ ಪೂರ್ವಾಭಿಮುಖವಾಗಿದೆ. ಪೂರ್ವದ ಗೋಡೆಯಲ್ಲಿ ಲಿಂಗದರ್ಶನಕ್ಕಾಗಿ ಎರಡು ರಂಧ್ರಗಳಿವೆ. ಸುಂದರವಾದ ಸರಸ್ವತಿ ಮತ್ತು ನಾಗವಿಗ್ರಹಗಳಿವೆ. ಮಹಿಷಾಸುರಮರ್ದಿನಿ ಮತ್ತು ವಿಷ್ಣುವಿನ ಪೀಠಗಳಿವೆ. ಸರಸ್ವತಿ ವಿಗ್ರಹದಲ್ಲಿ ಒಂದು ಶಾಸನವಿದೆ. ಅದರ ಕಾಲ ಸು. 1232. ಗಳಗೇಶ್ವರ ದೇವಾಲಯ ಉಳಿದವಕ್ಕಿಂತ ಪ್ರಾಚೀನ. ಇಲ್ಲಿಯ ಸುಕನಾಸಿಯಲ್ಲಿ ಸುಂದರವಾಗಿ ಕೆತ್ತಿರುವ ವಿಗ್ರಹಗಳಿವೆ. ರಾಮಾಯಣದ ದೃಶ್ಯಗಳು, ದಶಾವತಾರ ಹಾಗೂ ಅಷ್ಟದಿಕ್ಪಾಲಕರ ಚಿತ್ರಣವಿದೆ. ಪಾಶ್ರ್ವನಾಥ ಬಸದಿ, ಹೊಯ್ಸಳರ ಶ್ರೇಷ್ಠ ವಾಸ್ತುಶಿಲ್ಪಗಳಲ್ಲಿ ಒಂ/ದು. ಕಪ್ಪುಶಿಲೆಯಿಂದ ನಿರ್ಮಿಸಿದ ಗರ್ಭಗೃಹ, ಸುಕನಾಸಿ, ನವರಂಗಗಳನ್ನು ಹೊಂದಿರುವ ಈ ಮಾದರಿಯ ಬಸದಿ ಕರ್ನಾಟಕದಲ್ಲಿ ಇದೊಂದೇ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ಕಮಲಪೀಠದ ಮೇಲಿನ ಮೂಲ ಜಿನಮೂರ್ತಿ ಈಗ ಇಲ್ಲ. ಅದರ ಜಾಗದಲ್ಲಿ ಅನಂತನಾಥನ ವಿಗ್ರಹವಿದೆ.		
(ಎಮ್.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ